ಕ್ರಾಸ್‍ಬಿಲ್	
	ಲಾಕ್ಸಿಯ ಜಾತಿಗೆ ಸೇರಿದ ಮೂರು ಪಕ್ಷಿ ಪ್ರಭೇದಗಳಿಗೆ ಬಳಸುವ ಸಾಮಾನ್ಯ ಹೆಸರು. (ಪ್ಯಾಸೆರಿಫಾರ್ಮೀಸ್ ಗಣ, ಪ್ಲಾಸಿಯಿಡೀ ಕುಟುಂಬ). ಗಿಳಿಗಳನ್ನು ಹೋಲುವ ಈ ಹಕ್ಕಿಗಳ ಕೊಕ್ಕಿನ ಎರಡು ಭಾಗಗಳು ಅಡ್ಡ ಹಾಯ್ದಿರುವುದರಿಂದ ಇವಕ್ಕೆ ಈ ಹೆಸರು ಬಂದಿದೆ. ಕೊಕ್ಕಿನ ಈ ಮಾರ್ಪಾಡು ಇವು ಶಂಕುಧಾರಿ ಸಸ್ಯಗಳ (ಕೋನಿಫರ್ಸ್) ಫಲಗಳನ್ನು ಸೀಳಿ ಅವುಗಳಲ್ಲಿ ಅಡಗಿರುವ ಬೀಜಗಳನ್ನು ನಾಲಗೆಯಿಂದ ಆರಿಸಿಕೊಳ್ಳಲು ಅನುಕೂಲವಾಗಿದೆ. ಲಾಕ್ಸಿಯ ಕರ್ವಿರಾಸ್ಟ್ರ ಎಂಬ ಕೆಂಪು ಕ್ರಾಸ್‍ಬಿಲ್ ಉತ್ತರ ಅಮೆರಿಕದ ಉತ್ತರದ ನಿತ್ಯಹರಿದ್ವರ್ಣದ ಅರಣ್ಯಗಳಿಂದ ಹಿಡಿದು ದಕ್ಷಿಣದಲ್ಲಿರುವ ಉತ್ತರ ಕೆರೋಲಿನ ಮತ್ತು ಪಶ್ಚಿಮ ಮೆಕ್ಸಿಕೋವರೆಗೂ ಕಂಡುಬರುತ್ತದೆ. ವಯಸ್ಸಾದಾಗ ಗಂಡುಹಕ್ಕಿ ಇಟ್ಟಿಗೆ ಕೆಂಪಾಗಿರುತ್ತದೆ; ಇದರ ರೆಕ್ಕೆ ಮತ್ತು ಪುಕ್ಕಗಳು ಮಾತ್ರ ಮಾಸಲು ಬಣ್ಣವಾಗಿರುತ್ತವೆ. ಹೆಣ್ಣು ಹಕ್ಕಿ ಮತ್ತು ಮರಿಗಳು ಮಾಸಲು ಹಳದಿ ಮಿಶ್ರಿತ ಹಸಿರಾಗಿರುತ್ತವೆ. ಸ್ನೇಹಭಾವದಿಂದ ಜೀವಿಸುವ ಸಂಘಜೀವಿ ಹಕ್ಕಿಗಳಿವು. ಸಾಮಾನ್ಯವಾಗಿ ಶಂಕುಧಾರಿ ಮರಗಳನ್ನು ಹುಡುಕಿಕೊಂಡು ಒಂದು ಪ್ರದೇಶದಿಂದ ಇನ್ನೊಂದಕ್ಕೆ ತಿರುಗಾಡುವ ಇವು ಆಹಾರ ಯಥೇಚ್ಛವಾಗಿರುವೆಡೆ ಚಳಿಗಾಲವಾದರೂ ನೆಲೆಯೂರಿ ಗೂಡು ಕಟ್ಟುತ್ತವೆ. ಒರಟೊರಟಾಗಿ ಕಟ್ಟುವ ಗೂಡಿನಲ್ಲಿ ಎಳೆ ಹಸಿರು ಬಣ್ಣದ 3-4 ಮೊಟ್ಟೆಯಿಡುತ್ತವೆ. ಮೊಟ್ಟೆಗಳ ಮೇಲೆ ಹೆಣ್ಣುಪಕ್ಷಿ ಕಾವು ಕುಳಿತಿರುವಾಗ ಗಂಡು ಪಕ್ಷಿ ಅದಕ್ಕೆ ಆಹಾರ ಒದಗಿಸುತ್ತದೆ. ಕೆಲವು ವೇಳೆ ಕ್ರಾಸ್‍ಬಿಲ್ ಪಕ್ಷಿಗಳು ಮನಮೋಹಕವಾಗಿ ಹಾಡುತ್ತವೆ. ಆದರೆ ಇವು ಒಟ್ಟುಗೂಡುವಾಗ ಮಾಡುವ ಧ್ವನಿ ಒಂದು ವಿಶೇಷ ರೀತಿಯದಾಗಿರುತ್ತದೆ.

	ಲಾಕ್ಸಿಯ ಲ್ಯೂಕಾಪ್ಟರ ಎಂಬ ಬಿಳಿರೆಕ್ಕೆಯ ಅಥವಾ ಇಗ್ಗೆರೆಯ ಕ್ರಾಸ್‍ಬಿಲ್ ಉಷ್ಣ ಮತ್ತು ಸಮಶೀತೋಷ್ಣವಲಯಗಳೆರಡಲ್ಲೂ ವಾಸಿಸುತ್ತದೆ. ವೆಸ್ಟ್‍ಇಂಡೀಸಿನ ಹಿಸ್ಸೇನಿಯೋಲ ಬೆಟ್ಟಗಾಡುಗಳಲ್ಲಿ ಇದರ ಒಂದು ತಳಿ ಜೀವಿಸುತ್ತದೆ.

	ಸ್ಕಾಂಡಿನೇವಿಯ ದೇಶಗಳಲ್ಲಿ ಲಾಕ್ಸಿಯ ಪಿಟೋಸಿಟ್ಟಾಕಸ್ ಎಂಬ ಒಂದು ಪ್ರಭೇದ ವಾಸಿಸುತ್ತದೆ.
											(ಜಿ.ಎಂ.ಬಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ